Tuesday, August 24, 2010

ಸಾಹಿತ್ಯ ಯಾಕೆ ಬೇಕು ಮತ್ತು ಅದರ ಉದ್ದೇಶ..

ಈ ಬ್ಲಾಗ್ ನಲ್ಲಿ ನನಗೆ ಹೊಳೆದ ವಿಚಾರಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ, ಬರವಣಿಗೆಯಲ್ಲಿ ಏನೇನೂ ಪರಿಣಿತಿ ಇಲ್ಲದ ನಾನು ಮಾಡುತ್ತಿರುವ ಮೊದಲ ಪ್ರಯತ್ನ ತಪ್ಪಿದ್ದರೆ ಕ್ಷಮೆಯಿರಲಿ.

ನನ್ನನ್ನು ತುಂಬಾ ಕಾಡಿರುವ ಪ್ರಶ್ನೆ ಸಾಹಿತ್ಯ ಯಾಕೆ ಬೇಕು ಎಂಬುದು ಮತ್ತು ಅದರ ಉದ್ದೇಶವೇನು ಎಂಬುದು. ಈ ಪ್ರಶ್ನೆಗೆ ಉತ್ತರ ಹುಡುಕುವುದಕ್ಕೆ ಶುರು ಮಾಡಿದ ಕೂಡಲೇ ಹುಟ್ಟುವ ಮತ್ತೊಂದು ಪ್ರಶ್ನೆ ಸಾಹಿತ್ಯ ಎಂದರೇನು ಅನ್ನೋದು. ಸಾಹಿತ್ಯ ಅನ್ನೋ ಪದದ ಅರ್ಥ ಹೇಳುವುದೇ ಕಷ್ಟ. ತುಂಬಾ ಸರಳವಾಗಿ ಹೇಳಬೇಕೆಂದರೆ ಸಾಹಿತ್ಯ ಒಂದು ಅಭಿವ್ಯಕ್ತಿ ಮಾಧ್ಯಮ. ನನಗೆ ಅನಿಸಿದ ಹಾಗೆ ಪ್ರತಿ ಮನುಷ್ಯನೊಳಗೂ ಭಾವನೆಗಳು, ಸಂಘರ್ಷಗಳು, ಪ್ರಶ್ನೆಗಳು, ಗೊಂದಲಗಳು, ತಲ್ಲಣಗಳು ನಡೆಯುತ್ತಲೇ ಇರುತ್ತವೆ. ಅಂತಹ ಭಾವನೆಗಳನ್ನು ಅತ್ಯಂತ ಯಶಸ್ವಿಯಾಗಿ ಭಾಷೆಯನ್ನು ಉಪಯೋಗಿಸಿಕೊಂಡು ಮತ್ತೊಬ್ಬರಿಗೆ ದಾಟಿಸುವುದೇ ಸಾಹಿತ್ಯವಾ! ತನ್ನ ದೈನಿಕ ಜೀವನದಲ್ಲಿ ಮುಳುಗಿಹೋದ ಮನುಷ್ಯನಿಗೆ ತನ್ನೊಳಗೆ, ತನ್ನ ಸುತ್ತಮುತ್ತಲಿನ ಜಗತ್ತಿಗೆ ತನ್ನದೇ ರೀತಿಯಲ್ಲಿ ಸ್ಪಂದಿಸುವ ಮಾಧ್ಯಮ ಸಾಹಿತ್ಯವಾ? ಆದರೆ ಸಾಹಿತ್ಯವೆಂದರೆ ಬರೀ ವಾಸ್ತವ ಚಿತ್ರಣವಲ್ಲ, ಅದರಲ್ಲೊಂದಿಷ್ಟು ಕಲ್ಪನೆಯು ಉಂಟು. ತನ್ನದೇ ಸ್ವಗತದಲ್ಲಿ ಅನಿಸಿದ ಎಷ್ಟೋ ವಿಷಯಗಳನ್ನು ಲೇಖಕನೊಬ್ಬ ಪಾತ್ರಗಳ ಮೂಲಕ ಹೇಳುತ್ತಾ ಹೋಗಬಹುದು. ಸಾಹಿತ್ಯ ವಾಸ್ತವತೆಯಿಂದ ಪ್ರೇರಣೆ ಪಡೆದಂತಹುದು. ನನಗೆ ಹೊಳೆದ ಮತ್ತೊಂದು ವಿಚಾರವೆಂದರೆ ಎಷ್ಟೋ ಬಾರಿ ಸಾಹಿತ್ಯ ವೈಯಕ್ತಿಕ ನೆಲೆಯಿಂದ ಮಾತ್ರವಲ್ಲದೇ ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಯುದ್ದದ ಬಗ್ಗೆಯೂ ಮಾತನಾಡುತ್ತೆ. ಕೆಲವೆಲ್ಲ ಸಿದ್ದಾಂತಗಳ ಮೇಲೆ, ವಿಭಿನ್ನ ಚಿಂತನಾ ಮಾದರಿಗಳ ಮೇಲೆ ನಿಂತಂತಹ ಕೃತಿಗಳು. ಆದರೆ ನನಗೆ ಪ್ರತಿಸಾರಿಯೂ ಅನಿಸಿರುವುದು ಸಾಹಿತ್ಯದಲ್ಲಿ ಒಂದು ಜನಾಂಗದ ನೋವನ್ನ ಅವರು ಅನುಭವಿಸುವ ತಳಮಳವನ್ನ, ಯುದ್ದದಿಂದ ನೊಂದವರ ಕಥೆಗಳನ್ನ, ವಲಸೆ ಹೋಗಿ ಬೇರೆಲ್ಲೋ ವಾಸಿಸುತ್ತಿರುವ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳಲು ಹೆಣಗುತ್ತಿರುವ ಜನರ ಕತೆಯನ್ನು ಬರೆಯುತ್ತಿರುತ್ತಾರೆ. ಅಂದರೆ ಒಬ್ಬರ ನೋವನ್ನ ಅನುಭವಿಸುವ ತಳಮಳವನ್ನ ಅತ್ಯಂತ ಯಶಸ್ವಿಯಾಗಿ ಭಾಷೆಯ ಮೂಲಕ ದಾಟಿಸಿಬಿಟ್ಟರೇ ಅದೇ ಅದರ ಕೊನೆಯೇ? ಅಂದರೆ ಸಾಹಿತ್ಯಕ್ಕೂ ಒಂದು ಮಿತಿಯಿದೆ. ಅದು ಒಂದು ಸನ್ನಿವೇಶಕ್ಕೆ ಪ್ರತಿಕ್ರಿಯೆಯೇ ಹೊರತು ಪರಿಹಾರವಲ್ಲ. ಸಾಹಿತ್ಯ ಮನುಷ್ಯನ ಮನಸ್ಸಿನ ಆಳದಲ್ಲಿ ನಡೆಯುತ್ತಿರುವ ಗೊಂದಲಗಳು, ಯೋಚನೆಗಳನ್ನ ಶೋಧಿಸುವುದೇ ಹೊರತು ಅದು ನಮ್ಮ ಗೊಂದಲಗಳಿಗೆ ಪರಿಹಾರವಾಗಲಾರದಲ್ಲವೇ. ಉದಾಹರಣೆಗೆ ಯಾವುದೇ ಒಂದು ಸಾಹಿತ್ಯ ಕೃತಿಯಿಂದ ಜಾತಿ ವ್ಯವಸ್ಥೆಯನ್ನು ಬದಲಾಯಿಸುವುದು ಸಾಧ್ಯವಿಲ್ಲ. ಹಾಗಿದ್ದರೆ ಸಾಹಿತ್ಯ ಯಾಕೆ ಬೇಕು? ನನಗೆ ಅನಿಸಿದ ಪ್ರಕಾರ ಸಾಹಿತ್ಯ ನಮ್ಮಲ್ಲಿ ನಮ್ಮ ಸುತ್ತಮುತ್ತಲಿನ ಜಗತ್ತಿನ ಬಗ್ಗೆ, ನಮ್ಮ ಬಗ್ಗೆಯೇ ಅರಿವು ಮೂಡಿಸುವುದು, ನಮ್ಮೊಳಗೆ ಹೊಸ ಚಿಂತನೆಯನ್ನು ಹುಟ್ಟಿಸಬಹುದು. ಜಗತ್ತಿನ ಸಮಸ್ಯೆಗಳಿಗೆ ನಮ್ಮದೇ ರೀತಿಯಲ್ಲಿ ಎದುರಿಸುವ ಧೈರ್ಯ, ಸ್ಥೈರ್ಯ ನೀಡಬಹುದು. ನಮ್ಮೊಳಗೆ ಸೂಕ್ಷ್ಮತೆಯನ್ನು ಬೆಳಸಬಹುದು. ಇನ್ನೂ ವಿವರಿಸಲಾಗದ ಎಷ್ಟೋ ಸಂತೋಷವನ್ನು ಸಾಹಿತ್ಯ ನೀಡುತ್ತದೆ. ಅದನ್ನು ಪದಗಳಲ್ಲಿ ಹೇಳಲಾಗದು. ಅದು ಸಾಹಿತ್ಯ ಪ್ರೇಮಿಗಳಿಗೆ ಮಾತ್ರ ತಿಳಿಯುವಂತಹುದು.

--ರಶ್ಮಿ