Friday, August 3, 2007

ಕನ್ನಡಿಗರ ದೌರ್ಬಲ್ಯ ...

ಕನ್ನಡ ಈಗಾಗಲೆ ರಾಜ್ಯದ ಆಡಳಿತ ಭಾಷೆಯೇ. ಹೊಸದಾಗಿ ಆಗಬೇಕಾದದ್ದೇನೂ ಇಲ್ಲ, ಆದರೆ ಅದರ ಆಡಳಿತಾತ್ಮಕ ಅನುಷ್ಠಾನದಲ್ಲಿ ನಾವು ಸಮರ್ಥರಾಗಿಲ್ಲ. ಇದಕ್ಕೆ ಕಾರಣ ಭಾಷೆಯ ದೌರ್ಬಲ್ಯವಲ್ಲ, ಅದನ್ನಾಡುವ ಜನರ ದೌರ್ಬಲ್ಯ..

ಪ್ರಖರವಾಗಿ ಕನ್ನಡ ಬಳಕೆ ಮಾಡಲು ಇಚ್ಚಾಶಕ್ತಿ ಬೇಕು ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಬಹುಪಾಲು ದುರ್ಬಲ ವ್ಯಕ್ತಿತ್ವದ ಕನ್ನಡಿಗರಿಗೆ ಆತ್ಮವಿಶ್ವಾಸವಾಗಲಿ ಇಚ್ಚಶಕ್ತಿಯಾಗಲಿ ಬರಲು ಹೇಗೆ ತಾನೆ ಸಾಧ್ಯ? ಬಲವಿಲ್ಲದ ಛಲ ಮತ್ತು ಛಲವಿಲ್ಲದ ಬಲ ಎರಡು ಅಪ್ರಯೋಜನಕಾರಿ. ಅವು ಕುತ್ಸಿತತನವನ್ನೂ, ಮಾನಸಿಕ ದಾರಿದ್ರ್ಯವನ್ನೂ, ಪಲಾಯನವಾದವನ್ನೂ ಸೃಷ್ಠಿ ಮಾಡುತ್ತವೆ. ಇವುಗಳಿಂದ ಕನ್ನಡಿಗರು ಹೊರಬಂದಾಗ ಭಾಷೆ, ಸಾಹಿತ್ಯ, ಸಂಸ್ಕೃತಿ, ಸಂಪತ್ತು ಬೆಳೆಯುತ್ತದೆ, ಮತ್ತೆ ಇವೆಲ್ಲ ಅಪೇಕ್ಷಿಸುವುದು ಎದೆಗಾರಿಕೆಯನ್ನು, ಪ್ರಶ್ನಿಸುವ ಮನೋಭಾವವನ್ನು, ಸೂಕ್ಷ್ಮ ವ್ಯಕ್ತಿತ್ವವನ್ನು, ಸ್ವಾಭಿಮಾನವನ್ನು ಮತ್ತು ಎಲ್ಲೋ ಒಂದಿಷ್ಟು ಹಠಮಾರಿತನವನ್ನು.

ಕನ್ನಡಿಗರಿಗೆ ಈ ಗುಣಗಳು ಎಲ್ಲೋ ಕಳೆದು ಹೋದಂತಿವೆ, ಅವನ್ನು ನಾವು ತಿರುಗಿ ಹುಟ್ಟುಹಾಕಬೇಕೆಂದರೆ ನಾವು ಬಸವಣ್ಣನಲ್ಲಿಗೆ ಹೋಗಬೇಕು. ಛಲ ಬಲವನ್ನು ಉಂಬಳವಾಗಿ ಪಡೆದು ಕನ್ನಡಿಗರ ಬದುಕನ್ನು ಹಸನುಗೊಳಿಸಬೇಕು. ಹಸನುಗೊಂಡ ಬದುಕಿನಲ್ಲಿ ಕನ್ನಡ ಬೆಳೆಯುತ್ತದೆ, ಬಳುಕುತ್ತದೆ, ಜೀವ ಸಂಪತ್ತಿನಿಂದ ತುಂಬಿ ತುಳುಕಾಡುತ್ತದೆ. ಈ ದಿಕ್ಕಿನಲ್ಲಿ ಎಷ್ಟು ತಡವಾದರೂ ನಾವು ಹೆಜ್ಜೆಯಿಡಲೇಬೇಕು..


ಕೃಪೆ : ಪ್ರಜಾವಾಣಿ..

ಒಲವೇ....

ಒಲವೇ ಒಲವೇ ನನ್ನ ಪ್ರೀತಿಯ ಒಲವೇ
ಸೋತು ಬಂದೆ ನಿನ್ನ ಚೆಲುವಿಗೆ
ಮೆಚ್ಚಿ ಬಂದೆ ನಿನ್ನ ಒಲವಿಗೆ
ನಿನ್ನ ಕಂಗಳೇ ನನ್ನ ಬಾಳಿನ ದೀಪ
ನಿನ್ನ ಪ್ರೀತಿಯೇ ನನ್ನ ಜೀವನದ ರೂಪ

ಪ್ರೀತಿಸು ಪ್ರೀತಿಸು ಎಂದು ಗೋಗರೆಯಲಾರೆ
ನೀನೇ ಪ್ರೀತಿಸು ನನ್ನ ಪ್ರೀತಿಯ ಆಳ ಅರಿತಾಗಲೇ
ನೀನಿಲ್ಲದೆ ನಾ ಬದುಕಲಾರೆ ಎಂದು ಹೇಳಲಾರೆ
ನೀ ಜೊತೆಗಿದ್ದರೆ ಬಾಳು ಸುಂದರ ಎಂದು ಹೇಳಬಲ್ಲೆ
ಕನಸಲೂ ನೀನೇ ಮನಸಲೂ ನೀನೇ ಎಂದು ಬಣ್ಣಿಸಲಾರೆ
ನನ್ನದೇ ಆದರ್ಶಗಳ ಮಧ್ಯ ನಿನ್ನ ಪ್ರೀತಿಯನ್ನ ಹುಡುಕುತ್ತಾ ಬಂದೆ
ಸಾಧ್ಯವಿದ್ದಷ್ಟು ನಿನಗಾಗಿಯೇ ಕಾಯುವೆ ಓ ಕನಸಿನಬಾಲೆ
ಇದು ಪ್ರೇಮಕವಿತೆಯಲ್ಲ ಚೆಲುವೆ ನನ್ನ ನಿಜ ಜೀವನದ ವಾಸ್ತವ.....


-----ರಶ್ಮಿ.ಆರ್